ಆರೋಗ್ಯ ಸಲಹೆಗಳು

ಆರೋಗ್ಯ ಸಲಹೆಗಳು - ಆರೋಗ್ಯಕರ ಜೀವನಶೈಲಿಗೆ

ಗರ್ಭಿಣಿಯರು ಏನನ್ನು ತಿನ್ನಬಾರದು; ಕೆಲವು ಆಹಾರ ಮಾರ್ಗಸೂಚಿಗಳು.

ತಾಯ್ತನ ಹೆಣ್ಣಿನ ಜೀವನದಲ್ಲಿ ಅತ್ಯಂತ ಪ್ರಮುಖ ಘಟ್ಟ. ತಾಯ್ತನಕ್ಕೆ ಅಣಿಯಾಗುತ್ತಿರುವ ಮಹಿಳೆ ಏನು ತಿನ್ನಬಹುದು, ಏನು ತಿನ್ನಬಾರದು ಎಂಬುದು ಮುಖ್ಯವಾಗುತ್ತದೆ.

ಗರ್ಭಾವಸ್ಥೆಯ ಹಂತದಲ್ಲಿ ಪೋಷಕಾಂಶಗಳು, ಸಮತೋಲಿತ ಆಹಾರಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಇದರಿಂದ ತಾಯಿ ಮತ್ತು ಹುಟ್ಟಲಿರುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಗರ್ಭವತಿಯಾಗಿರುವಾಗ ಏನು ಸೇವಿಸಬಹುದು, ಏನು ಸೇವಿಸಬಾರದು ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಆಲ್ಕೋಹಾಲ್: ಗರ್ಭಿಣಿಯರು ಆಲ್ಕೋಹಾಲ್ ಸೇವಿಸಿದರೆ ಅದರಲ್ಲಿರುವ ನಂಜು ಅಥವಾ ವಿಷಕಾರಿ ಅಂಶ ಭ್ರೂಣದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಗರ್ಭವತಿ ತಾಯಿಯ ಮೇಲೆ ಆಲ್ಕೋಹಾಲ್ ಸೇವನೆ ಹಸಿವು ಕಡಿಮೆ ಮಾಡಿ ಅಪೌಷ್ಟಿಕತೆ ಹೆಚ್ಚಿಸುತ್ತದೆ. ಕಾಕ್ಟೈಲ್ ಗಳಲ್ಲಿ ಅಥವಾ ಇತರ ಆಹಾರ ಪದಾರ್ಥಗಳಲ್ಲಿ ಸಣ್ಣ ಪ್ರಮಾಣದಲ್ಲಿ ಕೂಡ ಆಲ್ಕೋಹಾಲ್ ಸೇವಿಸಬಾರದು. 

ತೊಳೆಯದೆ ಬಳಸುವ ಹಣ್ಣು-ತರಕಾರಿಗಳು: ಆರೋಗ್ಯಕರ ಪಥ್ಯ ಅಥವಾ ಡಯಟ್ ನಲ್ಲಿ ಹಣ್ಣು ಮತ್ತು ತರಕಾರಿ ಪ್ರಮುಖ ಭಾಗವಾದರೂ ಅವುಗಳನ್ನು ಸರಿಯಾಗಿ ತೊಳೆಯದೆ, ಸ್ವಚ್ಛ ಮಾಡದೆ ಬಳಸಿದರೆ ತಾಯಿ ಮತ್ತು ಭ್ರೂಣದಲ್ಲಿರುವ ಶಿಶುವಿನ ಮೇಲೆ ಅಗಾಧ ಪರಿಣಾಮ ಬೀರುತ್ತದೆ.ಸೋಂಕುಗಳು ಕೂಡ ತಗಲುವ ಸಾಧ್ಯತೆಯಿದೆ.

ಗರ್ಭವತಿಯರು ಹಸಿ ತರಕಾರಿಗಳನ್ನು ಸೇವಿಸುವುದಕ್ಕಿಂತ ಹೆಚ್ಚಾಗಿ ಶುಚಿಯಾದ ಬೇಯಿಸಿದ ತರಕಾರಿಗಳನ್ನು ಸೇವಿಸುವುದು ಒಳಿತು. ಬಾಳೆಹಣ್ಣು, ಕಿತ್ತಳೆ ಮೊದಲಾದ ಹಣ್ಣುಗಳು ಸೇವನೆಗೆ ಉತ್ತಮ.

ಕೆಫೀನ್: ಅತಿಯಾಗಿ ಕೆಫೀನ್ ಸೇವಿಸುವುದರಿಂದ ಅದು ಗರ್ಭದ ಮೇಲೆ ಪರಿಣಾಮ ಬೀರಿ ಮಗುವಿನ ಆರೋಗ್ಯಕ್ಕೆ ಕುಂದುಂಟಾಗಬಹುದು. ಗರ್ಭಾವಸ್ಥೆಯಲ್ಲಿ ಮಹಿಳೆಯರು ಕಾಫಿ, ಟೀ, ಶಕ್ತಿವರ್ಧಕ ಪಾನೀಯಗಳು, ಪೆಪ್ಸಿ, ಕೋಲಾಗಳಂತವುಗಳನ್ನು ಸೇವಿಸದಿರುವುದು ಒಳಿತು.

ಹಸಿ ಮೊಟ್ಟೆ: ಗರ್ಭವತಿಯರು ಹಸಿ ಮೊಟ್ಟೆ ಸೇವಿಸುವುದು ಅಪಾಯಕಾರಿ, ಏಕೆಂದರೆ ಅದರಲ್ಲಿರುವ ಬ್ಯಾಕ್ಟೀರಿಯಾದಿಂದ ತೀವ್ರ ಸೋಂಕು ತಗಲುವ ಸಾಧ್ಯತೆಯಿದೆ. ಮೊಟ್ಟೆಯೊಳಗಿರುವ ಹಳದಿ ಲೋಳೆ ಗಟ್ಟಿಯಾಗುವವರೆಗೆ ಮೊಟ್ಟೆಯನ್ನು ಬೇಯಿಸಿ ನಂತರ ಸೇವಿಸುವುದು ಉತ್ತಮ.

ಹಸಿ ಹಾಲು: ಬಿಸಿ ಮಾಡದಿರುವ ಅಥವಾ ಪಾಶ್ಚರೀಕರಿಸದಿರುವ ಹಾಲು ಸೇವನೆ ಕೂಡ ಗರ್ಭಿಣಿಯರಿಗೆ ತೊಂದರೆಯುಂಟುಮಾಡುವ ಸಾಧ್ಯತೆಯಿದೆ, ಅದರಿಂದ ಭ್ರೂಣಕ್ಕೂ ಅಪಾಯವಿದೆ.

ಹಸಿ ಹಾಲಿನಿಂದ ತಯಾರಿಸಿದ ಉತ್ಪನ್ನಗಳಾದ ಮೊಸರು, ಪನ್ನೀರ್ ಅಥವಾ ಚೀಸ್ ಸೇವನೆ ಕೂಡ ಒಳ್ಳೆಯದಲ್ಲ. ಬ್ಲೂ ಚೀಸ್ ನ್ನು ಕೂಡ ಗರ್ಭಿಣಿಯರು ಸೇವಿಸಬಾರದು. ಪಾಶ್ಚರೀಕರಿಸಿದ ಹಾಲು ಮತ್ತು ಅದರ ಉತ್ಪನ್ನಗಳು ಸೇವನೆಗೆ ಸುರಕ್ಷಿತವಾಗಿರುತ್ತದೆ.
ಹಸಿ ಸಮುದ್ರ ಆಹಾರಗಳು ಮತ್ತು ಹಸಿ ಮೀನು: ಮೀನು ಆರೋಗ್ಯಕ್ಕೆ ಒಳ್ಳೆಯ ಆಹಾರ, ಆದರೆ ಗರ್ಭಿಣಿಯರು ಸೇವಿಸುವಾಗ ಕೆಲವು ಮುನ್ನೆಚ್ಚರಿಕೆ ವಹಿಸಬೇಕು. ಶಾರ್ಕ್, ಕತ್ತಿಮೀನು, ಮ್ಯಾಕೆರೆಲ್, ಹೆರಿಂಗ್ಸ್, ಸಾರ್ಡಿನ್ ಗಳನ್ನು ಮಿತ ಪ್ರಮಾಣದಲ್ಲಿ ವಾರಕ್ಕೆ 180ರಿಂದ 240 ಗ್ರಾಂಗಳಷ್ಟು ಮಾತ್ರ ಸೇವನೆ ಮಾಡಬಹುದು.

ದೊಡ್ಡ ದೊಡ್ಡ ಮೀನುಗಳಲ್ಲಿ ಹೆಚ್ಚಿನ ಸಾಂದ್ರತೆಯ ಪಾದರಸವಿರುತ್ತದೆ, ಅದು ಮಗುವಿನ ನರ ವ್ಯವಸ್ಥೆಯ ಬೆಳವಣಿಗೆಗೆ ಹಾನಿಯನ್ನುಂಟುಮಾಡುತ್ತದೆ.

ಹಸಿ ಮೀನು, ಸುಶಿಗಳನ್ನು ಸೇವಿಸದಿರುವುದು ಒಳ್ಳೆಯದು. ಬೇಯಿಸಿದ ಮೀನುಗಳನ್ನು ಮಾತ್ರ ಗರ್ಭಿಣಿಯರು ಸೇವಿಸಬೇಕು. ಸಮುದ್ರದ ಮೀನುಗಳನ್ನು ಸಹ ಚೆನ್ನಾಗಿ ಬೇಯಿಸಿ ತಿನ್ನಬೇಕು.

ಹಸಿ ಮಾಂಸ, ಅರೆಬೆಂದ ಮಾಂಸಗಳು: ತಂದೂರಿ, ಕಬಾಬ್ ಮತ್ತು ಬಾರ್ಬೆಕ್ಯೂಡ್ ಮಾಂಸಗಳು ರಕ್ತದಿಂದ ಬೆರೆತಿರದಂತೆ ನೋಡಿಕೊಳ್ಳಬೇಕು. ಮಾಂಸದ ಬಣ್ಣ ಬೇಯಿಸಿದಾಗ ಗುಲಾಬಿ ಬಣ್ಣದಿಂದ ಕೆಂಪು ಬಣ್ಣಕ್ಕೆ ತಿರುಗಿರಬೇಕು.

ಯಕೃತ್ತಿನಂತಹ ಮಾಂಸದ ಭಾಗಗಳು: ಯಕೃತ್ತಿನಂತಹ ಮಾಂಸಾಹಾರಿ ಭಾಗಗಳಲ್ಲಿ ವಿಟಮಿನ್ ಎ ಸೇರಿದಂತೆ ವಿಟಮಿನ್ ಸೇರ್ಪಡೆಯಾಗಿರುತ್ತದೆ. ವಿಟಮಿನ್ ಎ ಜಾಸ್ತಿ ಸೇವನೆ ಮಾಡಿದರೆ ಗರ್ಭಾವಸ್ಥೆಯಲ್ಲಿ ವಿಷವಾಗಿ ಪರಿಣಾಮ ಬೀರುತ್ತದೆ. ಹೀಗಾಗಿ ಯಕೃತ್ತಿನಂತಹ ಭಾಗಗಳನ್ನು ಸೇವಿಸಬೇಡಿ.

Leave a Comment

error: Content is protected !!