ಕರಿಬೇವು : ಅಡುಗೆಯಲ್ಲಿ ಒಗ್ಗರಣೆ ಕೊಡುವಾಗ ಕರಿಬೇವಿನ ಎಲೆ ಇಲ್ಲದಿದ್ದರೆ ಅದು ಅಪೂರ್ಣವೆನ್ನಿಸುವುದು. ಕರಿಬೇವಿನ ಸೊಪ್ಪು ಗಂಧ-ರುಚಿಗಾಗಿ ಅಷ್ಟೇ ಅಲ್ಲ, ಆರೋಗ್ಯಕ್ಕೂ ಹಿತಕರ. ಕರಿಬೇವಿನ ತವರು ಹಿಮಾಲಯ ಪ್ರದೇಶ. ಇದು ಎಲ್ಲೆಡೆ ಬೆಳೆಯುತ್ತದೆ. ಸಾರು, ಹುಳಿ, ಮಜ್ಜಿಗೆ, ಪಲ್ಯ, ಉಪಮಾ- ಇವಕ್ಕೆಲ್ಲ ಕರಿಬೇವಿನ ಕಂಪು ಬೇಕೇಬೇಕು. ಇದು ರುಚಿ-ಗಂಧ ಒದಗಿಸುವುದರ ಜೊತೆಗೆ ದೇಹದಲ್ಲಿರುವ ಸಕ್ಕರೆಯನ್ನೂ ಅಂಕೆಯಲ್ಲಿಡುತ್ತದೆ, ಅಲ್ಲದೆ ಅಜೀರ್ಣ, ಭೇದಿ, ಮಲಬದ್ಧತೆ, ಯಕೃತ್ ದೋಷಾದಿಗಳನ್ನು ಪರಿಹರಿಸಲು ವಿರಳ ಔಷಧಿಯಾಗಿದೆ. ಇದರಲ್ಲಿ ಅಸಂಖ್ಯ ರಾಸಾಯನಿಕ ದ್ರವ್ಯಗಳಿವೆ. ಕರಿಬೇವಿನ ಎಲೆಯಲ್ಲಿರುವ ತೈಲಾಂಶವನ್ನು ಬೇರ್ಪಡಿಸಿದರೆ ಅದು ದಟ್ಟ ವಾಸನೆಯ ಎಣ್ಣೆ. ಇದನ್ನು ಸಾಬೂನು ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕರಿಬೇವಿನ ಗಿಡದ ಎಲೆ, ಬೇರು, ತೊಗಟೆ, ಮತ್ತು ಹಣ್ಣುಗಳು ಕೂಡ ಉಪಯುಕ್ತವಾಗಿವೆ.
ಔಷಧೀಯ ಗುಣಗಳ ಸಂಪತ್ತೇ ಕರಿಬೇವಿನಲ್ಲಿದೆ :
ಜ್ವರದಿಂದ ಬಳಲುವಾಗ ಕರಿಬೇವಿನ ಕಷಾಯ ಸೇವಿಸಿದರೆ ದಾಹ, ಉಷ್ಣತೆ ಕಡಿಮೆಯಾಗುತ್ತದೆ.
ಬೊಜ್ಜು ಕರಗಿಸಬೇಕೆನ್ನುವವರಿಗೆ ಸುಲಭೋಪಾಯ- ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕರಿಬೇವಿನ ಎಲೆ(10ರಿಂದ 20) ತಿನ್ನಬೇಕು.
ಮಧುಮೇಹದಿಂದ ಬಳಲುವವರು ಪ್ರತಿದಿನ ಬೆಳಿಗ್ಗೆ 10 ಎಲೆ ತಿನ್ನಬೇಕು.
ಮೂಲವ್ಯಾಧಿಯಿಂದ ಬಳಲುವವರು ಕರಿಬೇವಿನ ಚಿಗುರು ಎಲೆಗಳನ್ನು ಜೇನುತುಪ್ಪದಲ್ಲಿ ಅದ್ದಿ ತಿನ್ನಬೇಕು.
ಆಮ್ಲಪಿತ್ತದಿಂದ (‘ಎಸಿಡಿಟಿ”ಯಿಂದ) ಬಳಲುವವರು ಕರಿಬೇವಿನ ಮರದ ತೊಗಟೆಯ ಒಂದು ಚಮಚೆ ಪುಡಿಯನ್ನು ನೀರಲ್ಲಿ ಬೆರೆಸಿ ಸೇವಿಸಬೇಕು.
ಕರಿಬೇವಿನ ತಾಜಾ ಎಲೆಗಳಿಂದ ತೆಗೆದ ಶುದ್ಧ ರಸವನ್ನು ಕಣ್ಣಲ್ಲಿ ಹಾಕಿದರೆ ಕಣ್ಣಿನ ಪೊರೆಬರುವುದನ್ನು ತಡೆಯಬಹುದು.(ರಸ ತಯಾರಿಸುವಾಗ ಎಚ್ಚರ ಅವಶ್ಯ, ಸ್ವಚ್ಛತೆ ಬಹುಮುಖ್ಯ.)
ಆಮಶಂಕೆ ಭೇದಿಯಾಗುತ್ತಿದ್ದರೆ ಕರಿಬೇವಿನ ಕಷಾಯ ಉತ್ತಮ.
ರಕ್ತಭೇದಿಯ ಬಾಧೆ ಇದ್ದವರು ಕರಿಬೇವಿನ ಚಟ್ನಿ ತಿನ್ನಬೇಕು.
ಕರಿಬೇವಿನ ಎಣ್ಣೆ ಬಳಸಿದರೆ ತಲೆಗೂದಲು ಉದುರುವಿಕೆ ನಿಲ್ಲುತ್ತದೆ, ಕೂದಲು ಕಪ್ಪಾಗಿ, ಸೊಂಪಾಗಿ ಬೆಳೆಯುತ್ತವೆ.
ಕರಿಬೇವಿನ ತೈಲ ತಯಾರಿಸುವ ವಿಧಾನ :
ಒಂದು ಭಾಗ ಕೊಬ್ಬರಿ ಎಣ್ಣೆ ಇಲ್ಲವೆ ಎಳ್ಳೆಣ್ಣೆಗೆ ಕಾಲು ಭಾಗ ಕರಿಬೇವಿನ ರಸ ಬೆರೆಸಿ, ಒಲೆಯ ಮೇಲಿಟ್ಟು ಕಾಯಿಸಬೇಕು. ಸಣ್ಣಗಿನ ಉರಿಯ ಮೇಲೆ ನೀರಿನಂಶ ಹೋಗುವ ವರೆಗೆ ಕಾಯಿಸಬೇಕು. (ಒಂದು ಸೌಟಿನಲ್ಲಿ ಎಣ್ಣೆ ಹಾಕಿ ಒಲೆಯ ಮೇಲಿಟ್ಟಾಗ ಚಟ್ ಚಟ್ ಶಬ್ದ ಬಾರದಿದ್ದರೆ ತೈಲ ತಯಾರಾಗಿದೆ ಎಂದರ್ಥ.) ನಂತರ ಇಳಿಸಿ, ಆರಿಸಿ, ಶೋಧಿಸಿ ಬಾಟಲಿಯಲ್ಲಿ ತುಂಬಿಡಬೇಕು.
ಸಂಶೋಧನೆ : ಇಲಿಗಳಮೇಲೆ ಕರಿಬೇವಿನ ಎಲೆಗಳ ಪ್ರಯೋಗ ಮಾಡಿದಾಗ ರಕ್ತದಲ್ಲಿ ಸಕ್ಕರೆಯ ಅಂಶ ಗಣನೀಯ ಪ್ರಮಾಣದಲ್ಲಿ ಇಳಿಮುಖವಾದುದು ರುಜುವಾತಾಗಿದೆ. ಅಡಿಗೆಯಲ್ಲಿ ಕರಿಬೇವಿನ ಎಲೆಗಳನ್ನು ಯಥೇಚ್ಛ ಬಳಸಿ ಚಟ್ನಿಪುಡಿ, ಪಲ್ಯ, ಒಡೆ, ಚಿತ್ರಾನ್ನ, ಸಾರು, ಗೊಜ್ಜು, ತಂಬುಳಿ ತಯಾರಿಸುವ ವಿಧಾನ ಲೇಖಕರು ತಿಳಿಸಿದ್ದಾರೆ. ಕರಿಬೇವಿನ ಚಿತ್ರಾನ್ನ ಜ್ವರ ಬಂದು ಹೋದ ನಂತರ ಮತ್ತು ಅಜೀರ್ಣದಿಂದ ಬಳಲುವವರಿಗೆ ಸ್ವಾದಿಷ್ಟ ಆಹಾರವಾಗಿದೆ.