ವಿಟಮಿನ್ ಸಿಯಲ್ಲಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸೋಂಕನ್ನು ನಿವಾರಿಸುವ ಗುಣಗಳಿವೆ. ನಮ್ಮ ದೇಹಕ್ಕೆ ಪ್ರತಿಯೊಂದು ವಿಟಮಿನ್‍ಗಳು ಕೂಡ ಮುಖ್ಯ. ಒಂದರ ಕೊರತೆ ಕಾಣಿಸಿದರೂ ಅದು ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಖಚಿತ. ಕೆಲವು ವಿಟಮಿನ್ ಗಳು ನಮಗೆ ಆಹಾರಗಳಿಂದ ಲಭ್ಯವಾಗುವುದು. ದ್ರವಾಹಾರವಾಗಿರುವಂತಹ ವಿಟಮಿನ್ ಸಿಯು ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು.
ವಿಟಮಿನ್ ಸಿ ಲಾಭಗಳೆಂದರೆ ಅದು ಪರಿಧಮನಿ ಕಾಯಿಲೆ, ಪ್ರತಿರೋಧಕ ವ್ಯವಸ್ಥೆಯ ಕೊರತೆ, ಪ್ರಸವ ಪೂರ್ವ ಆರೋಗ್ಯ ಸಮಸ್ಯೆ, ಕಣ್ಣಿನ ಕಾಯಿಲೆ, ಚರ್ಮದಲ್ಲಿ ಕಂಡು ಬರುವ ನೆರಿಗೆಗೆ ಸಹಕಾರಿ, ಮಾನವರಲ್ಲಿ ಈ ಜೀವಸತ್ವದ ಕೊರತೆಯು ಸ್ಕರ್ವಿ ರೋಗವನ್ನು ಉಂಟುಮಾಡುತ್ತದೆ.
ವಿಟಮಿನ್ ಸಿ ಇರುವ ಆಹಾರಗಳು
ಪಾಲಕ್ ಸೊಪ್ಪು
ವಿಟಮಿನ್ ಸಿ ಯಥೇಚ್ಛ ಪ್ರಮಾಣದಲ್ಲಿರುವ ಪಾಲಕ್ ಸೊಪ್ಪು ಆ್ಯಂಟಿಆಕ್ಸಿಡೆಂಟ್ಸ್ ಮತ್ತು ಬೀಟಾ ಕ್ಯಾರೊಟಿನ್‌ನ ಆಗರವೂ ಆಗಿದೆ. ಇವು ಸೋಂಕಿನ ವಿರುದ್ಧ ಹೋರಾಡುತ್ತವೆ.
ಕಿವಿ ಹಣ್ಣು:
ಇದರಲ್ಲಿರುವ ವಿಟಮಿನ್ ಸಿ ಯಥೇಚ್ಛವಾಗಿದ್ದು ನೆಗಡಿಯನ್ನು ಹೋಗಲಾಡಿಸಿ ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನೂ ನೀಡುತ್ತದೆ.
ಪಪ್ಪಾಯಿ :
ಕಚ್ಚಾ ಪಪ್ಪಾಯಿಯಲ್ಲಿ ವಿಟಮಿನ್ ಸಿ ಉನ್ನತ ಮಟ್ಟದಲ್ಲಿದೆ. ಒಂದು ಕಪ್ ಕಚ್ಚಾ ಪಪ್ಪಾಯಿಯಲ್ಲಿ ದೈನಂದಿನ ಅಗತ್ಯಕ್ಕೆ ಬೇಕಾಗುವ 144 ಶೇ. ವಿಟಮಿನ್ ಸಿ ಇದೆ.
ಟೊಮೆಟೊ :
ಅಡುಗೆ ಮನೆಯಲ್ಲಿ ಸದಾ ಇರುವ ಮತ್ತು ವರ್ಷವಿಡೀ ಸಿಗುವ ಟೊಮೆಟೊ ವಿಟಮಿನ್ ಸಿ ಯ ಆಗರವಾಗಿದೆ. ಇದನ್ನು ಸಾರು, ಪಲ್ಯ, ಪಾಸ್ತಾ, ಸಲಾಡ್, ಸಾಸ್, ಸೂಪ್ ಇತ್ಯಾದಿಗಳಿಗೆ ಸೇರಿಸಿ ಸೇವಿಸಬಹುದು.
ನೆಲ್ಲಿಕಾಯಿ :
ಆಮ್ಲ ಎಂದೂ ಕರೆಯಲ್ಪಡುವ ನೆಲ್ಲಿಕಾಯಿಯಲ್ಲಿ ಮೂರು ಕಿತ್ತಳೆಗಳಲ್ಲಿರುವುದಕ್ಕಿಂತಲೂ ಹೆಚ್ಚಿನ ವಿಟಮಿನ್ ಸಿ ಇದೆ.
ದ್ರಾಕ್ಷಿ ಹಣ್ಣು:
ದ್ರಾಕ್ಷಿ ಹಣ್ಣು ಬಿಳಿ ಇರಲಿ ಕಪ್ಪು ಇರಲಿ, ರುಚಿಕರ ಮತ್ತು ಆರೋಗ್ಯಕರವಾಗಿವೆ. ಇದರಲ್ಲಿ ಉತ್ತಮ ಪ್ರಮಾಣದ ಕ್ಯಾಲೋರಿಗಳು, ಕರಗುವ ನಾರು ಮತ್ತು ವಿಟಮಿನ್ ಸಿ ಇವೆ. ನಿತ್ಯವೂ ಕೊಂಚ ಪ್ರಮಾಣದಲ್ಲಿ ದ್ರಾಕ್ಷಿಗಳನ್ನು ಸೇವಿಸುತ್ತಾ ಬಂದರೆ ಉತ್ತಮ ಆರೋಗ್ಯ ಮತ್ತು ದೀರ್ಘಾಯಸ್ಸನ್ನು ಪಡೆಯಬಹುದು.
ಸ್ಟ್ರಾಬೆರಿ
ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಈ ರುಚಿಕರ ಹಣ್ಣನ್ನು ಸಲಾಡ್, ಸ್ಮೂಥಿ ಮತ್ತು ಡೆಸರ್ಟ್ ಗಳಲ್ಲಿ ಬಳಸಬಹುದು.
ಕಿತ್ತಳೆ ಹಣ್ಣು :
ಕಿತ್ತಳೆಯು ವಿಟಮಿನ್ ಸಿ ಸಮೃದ್ಧವಾಗಿರುವಂತಹ ಸಿಟ್ರಸ್ ಹಣ್ಣಾಗಿದೆ. ಒಂದು ದೊಡ್ಡ ಕಿತ್ತಳೆ ಹಣ್ಣಿನಲ್ಲಿ 163 ಶೇ. ವಿಟಮಿನ್ ಸಿ ಇದೆ. ಕಿತ್ತಳೆ ಹಣ್ಣನ್ನು ಸಲಾಡ್, ಜ್ಯೂಸ್ ಮೂಲಕ ಸೇವಿಸಬಹುದು.
ಲಿಂಬೆರಸ :
ಒಂದು ಲಿಂಬೆಯ ರಸದಲ್ಲಿರುವ ವಿಟಮಿನ್ ಸಿ ದಿನದ ಅಗತ್ಯದ ಅರ್ಧದಷ್ಟನ್ನು ಪೂರೈಸುತ್ತದೆ. ಅಲ್ಲದೇ ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತದೆ ಮತ್ತು ಹೃದಯದ ಒತ್ತಡವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ.
ಅನಾನಸ್ ಹಣ್ಣು :
ಉಷ್ಣವಲಯದ ಹಣ್ಣಾಗಿರುವ ಅನಾನಸ್ ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಅನಾನಸ್ ನಲ್ಲಿ ಉನ್ನತ ಮಟ್ಟದ ವಿಟಮಿನ್ ಎ, ಕ್ಯಾಲ್ಸಿಯಂ, ಪೊಟಾಶಿಯಂ ಮತ್ತು ಆಹಾರದ ನಾರಿನಾಂಶವಿದೆ.
ಹೂಕೋಸು :
ಹೂಕೋಸು ವಿಟಮಿನ್ ಸಿ ಇರುವ ಎಲೆಜಾತಿಯ ವಿಭಾಗಕ್ಕೆ ಸೇರಿದ ತರಕಾರಿಯಾಗಿದೆ. ಹೂಕೋಸಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಕೆ, ಪೊಟಾಶಿಯಂ ಮತ್ತು ಪ್ರೋಸ್ಪರಸ್ ಸಮೃದ್ಧವಾಗಿದೆ.
ವಿಟಮಿನ್ ಸಿ ಯುಕ್ತ ಆಹಾರ ಪದಾರ್ಥಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಯಾವುದೇ ರೀತಿಯ ಸೋಂಕು ಹರಡದಂತೆ ತಡೆಯುವಲ್ಲಿ ಸಹಕಾರಿಯಾಗಬಲ್ಲದು.
