ಆರೋಗ್ಯ ಸಲಹೆಗಳು

ಆರೋಗ್ಯ ಸಲಹೆಗಳು - ಆರೋಗ್ಯಕರ ಜೀವನಶೈಲಿಗೆ

ಸಾಧಾರಣ ಕೆಮ್ಮು, ನೆಗಡಿಗೆ ಮನೆಮದ್ದು ಈರುಳ್ಳಿ ಸಿರಪ್

ಮೊದಲೆಲ್ಲಾ ಕೆಮ್ಮು, ಶೀತ ಬಂದರೆ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಯಾವಾಗಿನಿಂದ ಕೊರೊನಾ ವೈರಸ್ ಕಾಟ ಶುರುವಾಯ್ತೋ ಆಗಿನಿಂದ ಸಣ್ಣದಾಗಿ ಕೆಮ್ಮು ಬಂದರೂ ಭಯ ಆಗುತ್ತಿದೆ. ಏಕೆಂದರೆ ಕೆಮ್ಮು, ನೆಗಡಿ, ಜ್ವರ ಕೊರೊನಾ ವೈರಸ್ ಲಕ್ಷಣವಾಗಿದ್ದು, ಕೆಮ್ಮು ಬಂದಾಗ ಸೋಂಕಿಗೆ ತುತ್ತಾಗಿ ಬಿಟ್ವಾ? ಇದು ಸಾಧಾರಣ ಕೆಮ್ಮಾ? ಅಥವಾ ಕೊರೊನಾ ವೈರಸ್ ಲಕ್ಷಣವಾ ಎಂಬ ಪ್ರಶ್ನೆ ಕಾಡಲು ಆರಂಭವಾಗುತ್ತದೆ. ಮೇ ತಿಂಗಳು ಶುರುವಾಗುತ್ತಿದ್ದಂತೆ ಒಂದೆರಡು ಮಳೆ ಬಿದ್ದ ಮೇಲೆ ವಾತಾವರಣ ಬದಲಾವಣೆಯಿಂದ ಕೆಮ್ಮು, ನೆಗಡಿ ಆಗುವುದು ಸಹಜ.

ಸಾಧಾರಣ ಕೆಮ್ಮು, ನೆಗಡಿಯನ್ನು ಮನೆಮದ್ದಿನಿಂದಲೇ ಗುಣಪಡಿಸಿಕೊಳ್ಳಬಹುದು. ಕೆಮ್ಮು, ನೆಗಡಿಗೆ ಸಾಕಷ್ಟು ಮನೆಮದ್ದುಗಳಿವೆ. ಅದರಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಈರುಳ್ಳಿ ಸಿರಪ್. ಹೌದು. ಈರುಳ್ಳಿ ಸಿರಪ್ ಕೆಮ್ಮು, ನೆಗಡಿಯನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿದ್ದು, ಇದನ್ನು ತಯಾರಿಸುವುದು ಕೂಡ ಸುಲಭವಾಗಿದೆ. ಮನೆಯಲ್ಲಿ ಈರುಳ್ಳಿ ಸಿರಪ್ ಮಾಡಿ ಒಂದು ಡಬ್ಬದಲ್ಲಿ ತುಂಬಿಟ್ಟರೆ ಕೆಮ್ಮು ಬಂದಾಗ ಅದನ್ನು ಹೋಗಲಾಡಿಸಲು ಮದ್ದಾಗಿ ಬಳಸಬಹುದಾಗಿದೆ.

ಈರುಳ್ಳಿ ಸಿರಪ್ ಮಾಡುವ ವಿಧಾನ

  • ಈರುಳ್ಳಿಯ ಸಿಪ್ಪೆ ಸುಲಿದು ಅದನ್ನು ಚಿಕ್ಕದಾಗಿ ಕತ್ತರಿಸಿ ಗಾಜಿನ ಜಾರ್ ನಲ್ಲಿ ಹಾಕಿಡಿ.
  • ನಂತರ ಅದರ ಮೇಲೆ 2 ಚಮಚ ಜೇನು ತುಪ್ಪ ಹಾಕಿ. ರಾತ್ರಿ ಈ ಮಿಶ್ರಣ ಮಾಡಿ ಜಾರ್ ನ ಮುಚ್ಚಳ ಹಾಕಿಡಿ.
  • ಸುಮಾರು 6-10 ಗಂಟೆಗಳ ಕಾಲ ಈ ಮಿಶ್ರಣವನ್ನು ಹಾಗೆಯೇ ಬಿಡಿ.
  • ನಂತರ ಜಾರ್ ತಳದಲ್ಲಿ ಸಂಗ್ರಹವಾದ ಮಿಶ್ರಣವನ್ನು ಬೇರೆ ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳಿ.
  • ಕೆಮ್ಮು ಇದ್ದವರು ಈ ರಸವನ್ನು 1 ಚಮಚದಂತೆ ದಿನಕ್ಕೆ 2-3 ಬಾರಿ ತೆಗೆದುಕೊಂಡರೆ ಕೆಮ್ಮು ಕಡಿಮೆಯಾಗುತ್ತದೆ.
  • ಈರುಳ್ಳಿಯ ಆರೋಗ್ಯಕರ ಲಾಭವೇನು?

ಈರುಳ್ಳಿಯಲ್ಲಿ ರಂಜಕದ ಅಂಶವಿದೆ. ಈರುಳ್ಳಿಯಲ್ಲಿರುವ ಖಾರ ಹಾಗೂ ಘಾಟು ಅದರಲ್ಲಿ ಅಡಗಿರುವ ಔಷಧೀಯ ಗುಣಗಳನ್ನು ಸೂಚಿಸುತ್ತದೆ. ಇದು ದೇಹದಲ್ಲಿರುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವಲ್ಲಿ ಸಹಕಾರಿಯಾಗಿದ್ದು, ಈರುಳ್ಳಿ ಸೇವನೆಯಿಂದ ದೇಹದಲ್ಲಿ ಬಿಳಿ ರಕ್ತಕಣಗಳು ಹೆಚ್ಚಾಗುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿಯೂ ವೃದ್ಧಿಯಾಗುತ್ತದೆ. ಈರುಳ್ಳಿಯಲ್ಲಿ ಏಲ್ಲಿನ್ ಎಂಬ ಅಂಶವಿದೆ. ಈ ಅಂಶ ಬೆಳ್ಳುಳ್ಳಿಯಲ್ಲಿಯೂ ಇರುತ್ತದೆ. ಈರುಳ್ಳಿಯನ್ನು ಕತ್ತರಿಸಿದಾಗ ಅದರಲ್ಲಿ ಏಲ್ಲಿನ್ ಅಂಶ ಉತ್ಪತ್ತಿಯಾಗುತ್ತದೆ. ಇದು ಉಸಿರಾಟದ ತೊಂದರೆಯನ್ನು ಕಡಿಮೆ ಮಾಡುತ್ತದೆ.

ಜೇನು ತುಪ್ಪದಲ್ಲಿರುವ ಆರೋಗ್ಯಕರ ಲಾಭವೇನು?
ಜೇನು ತುಪ್ಪದಲ್ಲಿ ವಿಟಮಿನ್ ಬಿ, ಆ್ಯಂಟಿಬಾಡಿ, ಖನಿಜಾಂಶಗಳು, ಪ್ರೀಬಯೋಟಿಕ್ ಅಂಶ ಅಡಕವಾಗಿದೆ. ಜೇನು ತುಪ್ಪ ಸೇವನೆ ಮಾಡಿದರೆ ಅದು ಗಂಟಲಿನಲ್ಲಿ ಉಂಟಾದ ಕೆರೆತ ಕಡಿಮೆ ಮಾಡುತ್ತದೆ. ಜೇನು ತುಪ್ಪದಲ್ಲಿ ಆ್ಯಂಟಿಬಯೋಟಿಕ್ ಹಾಗೂ ಆ್ಯಂಟಿಫಂಗಲ್ ಅಂಶವಿದ್ದು, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಆರೋಗ್ಯ ವೃದ್ಧಿಸುತ್ತದೆ.

 ಈರುಳ್ಳಿ ಸಿರಪ್ ಅನ್ನು ಒಂದು ವರ್ಷಕ್ಕಿಂತ ಒಳಗಿನ ಮಕ್ಕಳಿಗೆ ಕೊಡಬೇಡಿ. ಒಂದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಹಾಗೂ ದೊಡ್ಡವರು  ಸಿರಪ್ ಸೇವಿಸಬಹುದು.

Leave a Comment

error: Content is protected !!