ಡಯಾಬಿಟಿಸ್ ಅಥವಾ ಮಧುಮೇಹ ಹೆಸರು ಕೇಳಿದ ತಕ್ಷಣವೇ ಹಲವರ ಬಾಯಿ ಕಹಿಯಾಗಲು ಆರಂಭಿಸುತ್ತದೆ. ಮಾನವ ಸಂಕುಲವನ್ನು ಅತಿಯಾಗಿ ಕಾಡುತ್ತಿರುವ ಈ ರೋಗವನ್ನು ಯೋಗದಿಂದ ಖಂಡಿತ ನಿಯಂತ್ರಣದಲ್ಲಿಡಲು ಸಾಧ್ಯ. ಮಧುಮೇಹ ಅಂಟಿಕೊಳ್ಳಲು ತಾಳಬದ್ಧವಿಲ್ಲದ ಜೀವನಶೈಲಿಯೂ ಕಾರಣ. ಆದರೆ, ಈ ರೋಗವನ್ನು ಯೋಗದಿಂದ ನಿಯಂತ್ರಣದಲ್ಲಿಡುವುದು ಹೇಗೆ, ಯಾವ್ಯಾವ ಆಸನಗಳನ್ನು ಮಾಡಬೇಕು ಎಂಬುದರ ಕುರಿತು ಇಲ್ಲಿ ಸ್ಥೂಲ ಮಾಹಿತಿ ಇದೆ. ಮಧುಮೇಹವು ಅನೇಕ ಕಾರಣಗಳಿಂದ ಬರುವಂತಹ ರೋಗ ಮತ್ತು ಸರಿಯಾದ ವ್ಯಾಯಾಮದ ಅಭಾವ, ಸರಿಯಾಗಿರದ ಆಹಾರ ಪದ್ಧತಿ, ಇತ್ಯಾದಿಯಿಂದ ಉಂಟಾಗುತ್ತದೆ. ಆಧುನಿಕ ದಿನದ ಒತ್ತಡ ಈ ಸವಾಲನ್ನು ಮತ್ತಷ್ಟು ಉಲ್ಬಣಿಸುತ್ತದೆ. ಈ ಎಲ್ಲಾ ಅಂಶಗಳೂ ಜೀವನಶೈಲಿಯತ್ತ ಸೂಚಿಸುತ್ತವೆ. ವೈದ್ಯಕೀಯವಾಗಿ ಗಮನ ನೀಡುವುದರ ಜೊತೆಗೆ ಜೀವನ ಶೈಲಿಯತ್ತ ಗಮನವಿಡುವುದು ಬಹಳ ಮುಖ್ಯ. ಪ್ರಾಣಾಯಾಮ, ಯೋಗ, ಧ್ಯಾನದ ಯೋಗಿಕ ಅಭ್ಯಾಸಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಸೂಕ್ತವಾದ ರೀತಿ. ಇದರೊಡನೆ ದಿನನಿತ್ಯ ನಡೆಯುವುದನ್ನು ಮರೆಯಬಾರದು. ನಡೆಯುವುದರೊಡನೆ ಯೋಗಿಕ ಅಭ್ಯಾಸಗಳನ್ನೂ ಸೇರಿಸಿ ಮಧುಮೇಹವನ್ನು ಸೋಲಿಸೋಣ.
ಯೋಗಿಕ ಅಭ್ಯಾಸಗಳಿಂದ ಅತ್ಯುತ್ತಮವಾದ ಫಲವನ್ನು ಪಡೆಯಲು ಅದನ್ನು ಎಡೆಬಿಡದೆ ನಿರಂತರವಾಗಿ ಅಭ್ಯಾಸ ಮಾಡಬೇಕು. ಸಾಧ್ಯವಾದಷ್ಟೂ ಒಂದೇ ಸಮಯದಲ್ಲಿ ಅಭ್ಯಾಸವನ್ನು ಮಾಡಿ. ನಿಮ್ಮ ದಿನನಿತ್ಯದ ಕೆಲಸಗಳಿಗೆ ಅನುಗುಣವಾಗಿ ಬೆಳಿಗ್ಗೆ ಅಥವಾ ಸಂಜೆ ಅಭ್ಯಾಸವನ್ನು ಮಾಡಿ. ಒಂದು ನಿರ್ದಿಷ್ಟವಾದ ಸಮಯವನ್ನು ಕಾದಿರಿಸಿ ಅದನ್ನು ನಿಷ್ಠೆಯಿಂದ ಪಾಲಿಸಿ. ಆಗ ಫಲಿತಾಂಶಗಳನ್ನು ಕಂಡು ಬೆರಗಾಗುತ್ತೀರಿ.
ಸುಪ್ತ ಮತ್ಸ್ಯೇಂದ್ರಿಯಾಸನ
ಮಲಗಿ ದೇಹವನ್ನು ತಿರುಚಿದಾಗ ಒಳಗಿನ ಅವಯವಗಳನ್ನು ತೀಡಬಹುದು ಮತ್ತು ಜೀರ್ಣದ ಪ್ರಕ್ರಿಯೆಯೂ ಸುಧಾರಿಸುತ್ತದೆ. ಈ ಭಂಗಿಯು ಹೊಟ್ಟೆಯ ಅವಯವಗಳ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ಆದ್ದರಿಂದ ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ಇದು ಬಲು ಉತ್ತಮ.
ಧನುರಾಸನ (ಧನುಸ್ಸಿನ ಭಂಗಿ)
ಧನುರಾಸನವು ಪ್ಯಾಂಕ್ರಿಯಸ್ (ಮೇದೋಜೀರಕ) ಅನ್ನು ಬಲಿಷ್ಠವಾಗಿಸುವುದರಿಂದ ಮಧುಮೇಹದ ರೋಗಿಗಳಿಗೆ ಇದು ಒಳ್ಳೆಯದು. ಈ ಯೋಗಾಸನವು ಹೊಟ್ಟೆಯ ಸ್ನಾಯುಗಳನ್ನೂ ಬಲಿಷ್ಠವಾಗಿಸುವುದಲ್ಲದೆ, ದಣಿವನ್ನು ಮತ್ತು ಒತ್ತಡವನ್ನೂ ನಿಭಾಯಿಸುವುದರಲ್ಲಿ ಉತ್ತಮ.
ಪಶ್ಚಿಮೋತ್ತಾನಾಸನ
ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿದಾಗ ಹೊಟ್ಟೆಯ ಮತ್ತು ಜನನಾಂಗದ ಅವಯವಗಳನ್ನು ತೀಡಲಾಗುತ್ತದೆ. ಇದು ಮಧುಮೇಹದ ರೋಗಿಗಳಿಗೆ ಉಪಯುಕ್ತಕರ. ಈ ಯೋಗದ ಭಂಗಿಯಿಂದ ದೇಹದ ಪ್ರಾಣದಲ್ಲಿ ಸಮತೋಲನವುಂಟಾಗಿ, ಮನಸ್ಸನ್ನು ಪ್ರಶಾಂತವಾಗಿ ಇಡುತ್ತದೆ.
ಅರ್ಧ ಮತ್ಸ್ಯೇಂದ್ರಿಯಾಸನ
ಕುಳಿತು ಅರ್ಧ ಬೆನ್ನನ್ನು ತಿರುಚುವುದರಿಂದ ಹೊಟ್ಟೆಯ ಅವಯವಗಳು ತೀಡಲ್ಪಡುತ್ತವೆ, ಶ್ವಾಸಕೋಶಗಳಿಗೆ ಆಮ್ಲಜನಕ ಹೆಚ್ಚುತ್ತದೆ, ಬೆನ್ನೆಲುಬು ಮೃದುವಾಗುತ್ತದೆ. ಮನಸ್ಸು ಪ್ರಶಾಂತವಾಗುತ್ತದೆ, ಬೆನ್ನೆಲುಬಿಗೆ ರಕ್ತಚಲನೆ ಹೆಚ್ಚುತ್ತದೆ.
ಶವಾಸನ
ಕೊನೆಯ ವಿಶ್ರಾಂತಿಯ ಭಂಗಿಯೆಂದರೆ ಶವಾಸನ. ಕೈಕಾಲು ಚಾಚಿ ಅಂಗಾತ ಮಲಗಿದ ಭಂಗಿಯಲ್ಲಿ ಒಂದೊಂದೇ ಅವಯವಗಳನ್ನು ಗಮನದಲ್ಲಿಟ್ಟುಕೊಂಡು ನಿಧಾನವಾಗಿ ಮತ್ತು ಸುದೀರ್ಘವಾಗಿ ಉಸಿರಾಡಿಸಬೇಕು. ಇದು ದೇಹವನ್ನು ಆಳವಾದ ಧ್ಯಾನದ ಸ್ಥಿತಿಗೆ ಕರೆದೊಯ್ದು, ದೇಹವು ವಿಶ್ರಾಂತಿಸಿ ಪುನರುಜ್ಜೀವಿತವಾಗುವಂತೆ ಮಾಡುತ್ತದೆ.
ಖಾಯಿಲೆಗಳ ಪ್ರಕ್ರಿಯೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಫ್ರೀ ರ‍್ಯಾಡಿಕಲ್ಸ್ನ ಬಗ್ಗೆ ತಿಳಿದುಕೊಳ್ಳಬೇಕು. ಫ್ರೀ ರ‍್ಯಾಡಿಕಲ್ಸ್ ನಕಾರಾತ್ಮಕವಾದ ಚಾರ್ಜನ್ನುಳ್ಳ ಅಣುಗಳಂತಹ ಪದಾರ್ಥಗಳಾಗಿದ್ದು, ಪ್ರಕೃತಿಯಲ್ಲಿ ಸ್ವಲ್ಪ ಬಹಳ ಕೆಲವೇ ಕ್ಷಣಗಳವರೆಗೆ, ನ್ಯಾನೊ ಸೆಕೆಂಡುಗಳವರೆಗೆ ಮಾತ್ರ ಇರುತ್ತದೆ. ಉದಾಹರಣೆಗೆ, ದೇಹದ ರೋಗನಿರೋಧಕ ಶಕ್ತಿಯು ಮುಕ್ತವಾದ ರ‍್ಯಾಡಿಕಲ್‌ಗಳನ್ನು ಬಿಡುಗಡೆಗೊಳಿಸಿ, ದೇಹದ ಕ್ರಿಮಿಗಳನ್ನು ನಿಯಂತ್ರಣದಲ್ಲಿಡುತ್ತದೆ. ದೇಹವು ಮುಕ್ತವಾದ ರ‍್ಯಾಡಿಕಲ್‌ಗಳನ್ನು ಆಂಟಿ-ಆಕ್ಸಿಡೆಂಟ್‌ಗಳಿಂದ ಸರಿದೂಗಿಸುತ್ತದೆ. ದೇಹದಲ್ಲಿ ಉತ್ಪಾದನೆಯಾಗುವ ಮೂರು ಮುಖ್ಯ ಆಂಟಿ ಆಕ್ಸಿಡೆಂಟ್‌ಗಳೆಂದರೆ ಗ್ಲುಟಥಯಾನ್, ಕ್ಯಾಟಲೇಸ್, ಸೂಪರ್ ಆಕ್ಸೈಡ್ ಡಿಸ್ ಮ್ಯೂಟೇಸ್ (ಎಸ್.ಒ.ಡಿ). ಬಾಹ್ಯದ ಆಂಟಿ ಆಕ್ಸಿಡೆಂಟ್‌ಗಳ ಮೂಲವೆಂದರೆ ವಿಟಮಿನ್ ಸಿ, ವಿಟಮಿನ್ ಇ, ಕೆಲವು ಖನಿಜಗಳು, ಇತ್ಯಾದಿ. ಆರ್ಟ್ ಆಫ್ ಲಿವಿಂಗ್‌ನ ಕಾರ್ಯಕ್ರಮಗಳ ಜೀವಾಳವಾದ ಸುದರ್ಶನ ಕ್ರಿಯೆಯು ಗ್ಲುಟಥೆಯಾನ್, ಕ್ಯಾಟಲೇಸ್ ಮತ್ತು ಎಸ್ ಒ ಡಿಯ ಮಟ್ಟವನ್ನು ಹೆಚ್ಚಿಸುತ್ತದೆ. ಬಾಹ್ಯದಿಂದ ಸೇವಿಸಲ್ಪಡುವ ಆಂಟಿ ಆಕ್ಸಿಡೆಂಟ್‌ಗಳ ಪರಿಣಾಮವನ್ನೂ ಸುದರ್ಶನ ಕ್ರಿಯೆ ಹೆಚ್ಚಿಸುತ್ತದೆ. ಸುದರ್ಶನ ಕ್ರಿಯೆಯು ರೋಗದ ಪ್ರಕ್ರಿಯೆಯ ಮೇಲೆ ನೇರ ಪರಿಣಾಮ ಬೀರುವುದರಿಂದ ಮಧುಮೇಹವನ್ನು ನಿಭಾಯಿಸುವಲ್ಲಿ ಬಲು ಮುಖ್ಯ. ಸುದರ್ಶನ ಕ್ರಿಯೆಯು ಅನುಪಮವಾದ ಉಸಿರಾಟದ ಪ್ರಕ್ರಿಯೆಯಾಗಿದ್ದು, ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಕ್ಕೆಸೆದು, ಒತ್ತಡದಿಂದ ಬಿಡುಗಡೆಗೊಳಿಸುತ್ತದೆ. ಜಗತ್ತಿನ ಎಲ್ಲೆಡೆಯೂ ಜನರು ಇದನ್ನು ಕಲಿತಿದ್ದು, ದೈಹಿಕ ಹಾಗೂ ಮಾನಸಿಕ ಒಳಿತನ್ನು ಅನುಭವಿಸಿದ್ದಾರೆ. ಸುದರ್ಶನ ಕ್ರಿಯೆ ಕಲಿಯುವುದು ಬಹಳ ಸುಲಭ ಮತ್ತು ಎಲ್ಲರೂ ಇದನ್ನು ಸುಲಭವಾಗಿ ಅಭ್ಯಾಸ ಮಾಡಬಹುದು. ಸುದರ್ಶನಕ್ರಿಯೆ ಮತ್ತು ಅದರ ಲಾಭಗಳ ಬಗ್ಗೆ ಇಲ್ಲಿ ಇನ್ನೂ ಹೆಚ್ಚು ತಿಳಿಯಬಹುದು.