ಮಧುಮೇಹ ನಿಯಂತ್ರಣದಲ್ಲಿಡುವ 10 ಗಿಡಮೂಲಿಕೆಗಳು!!!
ಮಧುಮೇಹಿಗಳು ಈ ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಆರೋಗ್ಯದ ಕಡೆ ಈ ಹಿಂದಿಗಿಂತಲೂ ತುಂಬಾ ಎಚ್ಚರಿಕೆವಹಿಸಬೇಕಾಗಿದೆ. ಹೊರಗಡೆ ವಾಕಿಂಗ್ ಹೋಗಲು ಸಾಧ್ಯವಿಲ್ಲ ಅಂತ ಸುಮ್ಮನೆ ಕೂರಬಾರದು, ಮನೆಯಲ್ಲಿ ವ್ಯಾಯಾಮವನ್ನು ಮಾಡಬೇಕು ಹಾಗೂ ತೆಗೆದುಕೊಳ್ಳುವ ಆಹಾರದಲ್ಲಿ ಕಟ್ಟುನಿಟ್ಟಿನ ಪಥ್ಯ ಮಾಡಬೇಕು. ಯಾವುದೇ ಕಾರಣಕ್ಕೂ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗಲು ಬಿಡಬಾರದು. ಮಧುಮೇಹದಲ್ಲಿ ಟೈಪ್1 ಹಾಗೂ ಟೈಪ್ 2 ಮಧುಮೇಹ ಎಂಬ ಎರಡು ವಿಧದಲ್ಲಿ ಶೇ. 90ರಷ್ಟು ಜನರು ಟೈಪ್ 2 ಮಧುಮೇಹ ಹೆಚ್ಚಿನವರಲ್ಲಿ ಕಂಡು ಬರುತ್ತದೆ. ಟೈಪ್ 2 ಮಧುಮೇಹಿಗಳಲ್ಲಿ ದೇಹಕ್ಕೆ ಅಗ್ಯತವಿರುವ ಇನ್ಸುಲಿನ್ ಪ್ರಮಾಣ ಉತ್ಪತ್ತಿ ಮಾಡುವುದಿಲ್ಲ. ಇನ್ನು ಟೈಪ್ 1 ಮಧುಮೇಹಿಗಳಲ್ಲಿ ದೇಹವು ಇನ್ಸುಲಿನ್ ಪ್ರಮಾಣ ಉತ್ಪತ್ತಿ ಮಾಡುವುದೇ ಇಲ್ಲ. ಇಂಥವರು ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳಬೇಕಾಗುತ್ತದೆ. ಟೈಪ್ 2 ಮಧುಮೇಹಿಗಳು ಮಾತ್ರೆ ಜೊತೆಗೆ ಆಹಾರಕ್ರಮದಲ್ಲಿ ಸ್ವಲ್ಪ ಕಟ್ಟುನಿಟ್ಟಿನ ಪಥ್ಯ ಪಾಲಿಸಿದರೆ ಮಧುಮೇಹ ನಿಯಂತ್ರಣದಲ್ಲಿಡುವುದು ದೊಡ್ಡ ವಿಷಯವಲ್ಲ. ಇನ್ನು ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗದಂತೆ ತಡೆಯುವಲ್ಲಿ ಕೆಲವೊಂದು ಗಿಡಮೂಲಿಕೆಗಳು ಕೂಡ ತುಂಬಾ ಸಹಕಾರಿಯಾಗಿವೆ.
ಇಲ್ಲಿ ಯಾವೆಲ್ಲಾ ಗಿಡಮೂಲಿಕೆಗಳು ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ ಎಂದು ನೋಡಿ:
ಮೆಂತೆ:- ಮೆಂತೆ ದೇಹದಲ್ಲಿ ಸಕ್ಕರೆಯಂಶ ಕಡಿಮೆ ಮಾಡಿ ಇನ್ಸುಲಿನ್ ಉತ್ಪತ್ತಿ ಹೆಚ್ಚುವಂತೆ ಮಾಡುತ್ತದೆ. ಇದರಲ್ಲಿ ಅಮೈನೋ ಆಮ್ಲ ಇರುವುದರಿಂದ ಮೆಂತೆಕಾಳು ಇನ್ಸುಲಿನ್ ಸೆನ್ಸಿಟಿವ್ ಹೆಚ್ಚು ಮಾಡುತ್ತದೆ. ಯಾರು 25ಗ್ರಾಂ ಮಂತೆಕಾಳು ಪ್ರತಿದಿನ ತಿನ್ನುತ್ತಾರೋ ಅವರ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿರುತ್ತದೆ, ಊಟದ ಬಳಿಕ ಕೂಡ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ ಎಂದು ಅಧ್ಯಯನ ಹೇಳಿದೆ. ಸೂಚನೆ: ಹಾಗಂತ ಮೆಂತೆಯನ್ನು ತುಂಬಾ ಪ್ರಮಾಣದಲ್ಲಿ ತಿನ್ನುವುದು ಮಾಡಬೇಡಿ. ಇದರಿಂದ ಹೊಟ್ಟೆ ಹಾಳಾಗುವುದು, ತಲೆಸುತ್ತು, ಹೊಟ್ಟೆ ಉಬ್ಬುವುದು ಮತ್ತು ತಲೆನೋವು ಮುಂತಾದ ಅಡ್ಡ ಪರಿಣಾಮ ಉಂಟಾಗುವುದು. ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು? ದಿನದಲ್ಲಿ 10ಗ್ರಾಂ ಮೆಂತೆಕಾಳು ರಾತ್ರಿ ನೀರಿನಲ್ಲಿನೆನೆಹಾಕಿ, ಬೆಳಗ್ಗೆ ಎದ್ದ ಬಳಿಕ ಉಪಾಹಾರದ ಮುನ್ನ ತಿನ್ನಿ.
ಅರಿಶಿಣ:- ಅರಿಶಿಣ ಕೊಂಬು ಇದ್ದರೆ ಅದನ್ನು ಸ್ವಲ್ಪ ತಿನ್ನುವುದರಿಂದ ಕೂಡ ದೇಹದಲ್ಲಿ ಇನ್ಸುಲಿನ್ ಪ್ರಮಾಣ ನಿಯಂತ್ರಣದಲ್ಲಿಡಬಹುದು. ಅರಿಶಿಣ ಪುಡಿ ಆದರೆ ಅರ್ಧ ಚಮಚ ಪುಡಿಯನ್ನು ದಿನದಲ್ಲಿ ಎರಡು ಬಾರಿ ನೀರಿನಲ್ಲಿ ಅಥವಾ ಹಾಲಿನಲ್ಲಿ ಕಲಿಸಿ ಕುಡಿಯಿರಿ.
ಹಾಗಾಲಕಾಯಿ:- ಇನ್ನು ಹಾಗಾಲಕಾಯಿ ಜ್ಯೂಸ್ ಕುಡಿಯುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಇದು ದೇಹದಲ್ಲಿ ಸಕ್ಕರೆಯಂಶವನ್ನು ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿಡುವಲ್ಲಿ ಸಹಕಾರಿ. ನೆನಪಿಡಿ ಹಾಗಂತ ತುಂಬಾ ಕುಡಿಯುವುದು ಕೂಡ ಒಳ್ಳೆಯದಲ್ಲ, ಜಠರಗರುಳಿನ ತೊಂದರೆ ಉಂಟಾಗುವುದು. ದಿನದಲ್ಲಿ 50ರಿಂದ 100ml ಅಂದರೆ 5-6 ಚಮಚವಷ್ಟೇ ಇದರ ಜ್ಯೂಸ್ ತೆಗೆದುಕೊಳ್ಳಿ.
ಮಧುನಾಶಿನಿ ಇದು ಕುರುಚಲು ಕಾಡಿನಲ್ಲಿ ಕಂಡು ಬರುತ್ತದೆ. ಕಾಲು ಚಮಚ ಮಧುನಾಶಿನಿ , ಕಾಲು ಚಮಚ ಅಶ್ವಗಂಧ , ಸ್ವಲ್ಪ ಶತಾವರಿ ರಸ ಮತ್ತು ಮಂಜಿಷ್ಟ ರಸ ಹಾಕಿ ಮಿಶ್ರಣ ಮಾಡಿಕೊಳ್ಳಿ , ನಂತರ ಸೇವಿಸಿ . ವಾರಕ್ಕೆ ಎರಡು ಬಾರಿ ಪುನಾರಾವರ್ತಿಸಿ ಹೀಗೆ ಮಾಡಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
ಜಿನ್ಸೆಂಗ್:- ಇದು ಚೈನೀಸ್ ಗಿಡಮೂಲಿಕೆಯಾಗಿದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ. ಇದು ಮಧುಮೇಹವನ್ನು ಶೇ. 15-20ರಷ್ಟು ನಿಯಂತ್ರಣದಲ್ಲಿಡುತ್ತದೆ. 3ಗ್ರಾಂ ಜಿನ್ಸೆಂಗ್ ಒಣಗಿಸಿ, ಪುಡಿ ಮಾಡಿ ಅದನ್ನು ಊಟಕ್ಕೆ ಎರಡು ಗಂಟೆ ಮುಂಚೆ ಕುಡಿಯಬೇಕು. ಹೀಗೆ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.
ಹೊನ್ನೆ ಮರ:- ಮಧುಮೇಹಿಗಳು ಆಗಾಗ ಮೂತ್ರ ವಿಸರ್ಜನೆಗೆ ಹೋಗುವುದನ್ನು ತಡೆಗಟ್ಟಲು ಹಾಗೂ ಉರಿಯೂತವನ್ನು ಕಡಿಮೆ ಮಾಡುವಲ್ಲಿ ಇದು ಸಹಕಾರಿಯಾಗಿದೆ. ಈ ಮರದಿಂದ ಮಾಡಿದ ಲೋಟದಲ್ಲಿ ನೀರು ತುಂಬಿ ರಾತ್ರಿ ಇಡಬೇಕು, ಇದನ್ನು ಬೆಳಗ್ಗೆ ಎದ್ದ ಕೂಡಲೇ ಕುಡಿಯಬೇಕು. ಇದರಿಂದ ಆಗಾಗ ಮೂತ್ರ ವಿಸರ್ಜನೆಗೆ ಹೋಗುವ ತೊಂದರೆ ತಪ್ಪುವುದು.
ಬಿಲ್ವಪತ್ರೆ ಇದರಲ್ಲೂ ಮಧುಮೇಹವನ್ನು ನಿಯಂತ್ರಿಸುವ ಗುಣವಿದೆ. ಪ್ರತಿದಿನ 500ಮಿಗ್ರಾಂ ಬಿಲ್ವೆ ತೆಗೆದುಕೊಳ್ಳುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಇದು ಎಷ್ಟು ಪ್ರಮಾಣದಲ್ಲಿ ತೆಗೆದುಕೊಂಡರೆ ನಿಮ್ಮ ದೇಹಕ್ಕೆ ಒಳ್ಳೆಯದು ಎಂದು ತಿಳಿದುಕೊಳ್ಳಲು ವೈದ್ಯರ ಸಲಹೆ ಪಡೆಯಿರಿ.
ಸಪ್ತರಂಗಿ ಈ ಬಳ್ಳಿ ಕೂಡ ಮಧುಮೇಹ ನಿಯಂತ್ರಿಸುವಲ್ಲಿ ಪರಿಣಾಮಕಾರಿ. ಇದರ ಎಲೆಗಳ ರಸ ಹಿಂಡಿ ವಾರಕ್ಕೆ ಎರಡು ಬಾರಿ ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಇದರ ಟೀಯನ್ನು ಆಹಾರದ ಜೊತೆ 6 ವಾರಗಳು ತೆಗೆದುಕೊಂಡರೆ ಮಧುಮೇಹ ಸಂಪೂರ್ಣ ನಿಯಂತ್ರಣದಲ್ಲಿರುತ್ತದೆ. ಕಹಿ ಬೇವಿನ ಎಲೆ ಕಹಿ ಬೇವಿನ ಎಲೆ ಕೂಡ ಮಧುಮೇಹವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ. ಇದು ದೇಹದಲ್ಲಿ ಚಯಾಪಚಯ ಕ್ರಿಯೆ ಉತ್ತಮವಾಗಿ ನಡೆಯಲು ಸಹಕಾರಿ. ಇದನ್ನು ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎನ್ನುವುದು ನಿಮ್ಮ , ವಯಸ್ಸು, ಆರೋಗ್ಯ ಸ್ಥಿತಿಯನ್ನು ಅವಲಂಬಿಸಿದೆ. ಆದ್ದರಿಂದ ಇದರ ಕುರಿತು ನಿಮ್ಮ ವೈದ್ಯರ ಸಲಹೆ ಪಡೆಯಿರಿ.
ಜಾಮೂನು ಎಲೆ ಜಾಮೂನು ಗಿಡದ ಎಲೆ ಕೂಡ ಮಧುಮೇಹವನ್ನು ನಿಯಂತ್ರಿಸುವಲ್ಲಿ ತುಂಬಾ ಸಹಕಾರಿ. ಇದು ಆಗಾಗ ಮೂತ್ರ ವಿಸರ್ಜನೆಗೆ ಹೋಗುವುದನ್ನು ತಡೆಗಟ್ಟುತ್ತದೆ. ಇದು ಕೂಡ ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕೆಂದು ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಸೇವಿಸಿ.
ಇತರ ಸಲಹೆ ಯಾವುದೇ ಸಿಹಿ ಪದಾರ್ಥಗಳನ್ನು ಸೇವಿಸಬೇಡಿ, ಹಣ್ಣುಗಳನ್ನು ಮಿತಿಯಲ್ಲಿ ತಿನ್ನಿ. ನಾರಿನ ಪದಾರ್ಥಗಳು ಆಹಾರದಲ್ಲಿ ಹೆಚ್ಚಾಗಿ ಇರಲಿ. ವ್ಯಾಯಾಮ ಮಾಡಿ. ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದರೆ ವೈದ್ಯರಿಗೆ ಕರೆ ಮಾಡಿ ಸಲಹೆ ಪಡೆಯಿರಿ.