ಆರೋಗ್ಯ ಸಲಹೆಗಳು

ಆರೋಗ್ಯ ಸಲಹೆಗಳು - ಆರೋಗ್ಯಕರ ಜೀವನಶೈಲಿಗೆ

ತುಂಬೆ ಹೂವಿನಿಂದ ತುಂಬಿ ತುಳುಕುವ ಆರೋಗ್ಯ…

ತುಂಬೆ ಗಿಡ. ಕೆಲವು ಪ್ರದೇಶದಲ್ಲಿ ಶಿವನಿಗೆ ಪ್ರಿಯವಾದ ಹೂವು ಅಂತ ಪರಿಗಣಿಸಲ್ಪಡುವ ಇದು ರುದ್ರಪುಷ್ಪ ಅಂತಲೂ ಜನಜನಿತವಾಗಿದ್ದು ಒಂದು ಔಷಧೀಯ ಸಸ್ಯವೂ ಹೌದು. ಪುರಾಣದ ಪ್ರಕಾರ ಶಿವನ ದೇಹದಲ್ಲಿ ವಿಷ ಸೇರಿದಾಗ ಅದರ ನಿವಾರಣೆಗೆ ತುಂಬೆ ಹೂವುಗಳನ್ನು ಬಳಸಿದ್ದರಿಂದಾಗಿ ಈಗಲೂ ಕೂಡ ಶಿವನಿಗೆ ತುಂಬೆ ಪುಷ್ಪ ಅರ್ಪಿಸುವ ಪರಿಪಾಠ ರೂಢಿಯಲ್ಲಿದೆಯಂತೆ.

ಸಂಸ್ಕೃತದಲ್ಲಿ ದ್ರೋಣ ಪುಷ್ಪ ಇಲ್ಲವೇ ಚಿತ್ರಕ್ಷುಪ ಎಂದು ಕರೆಯಲ್ಪಡುವ ಈ ತುಂಬೆ ಆಯುರ್ವೇದಿಯವಾಗಿ ಹಲವು ಕಾರಣಗಳಿಂದ ಬಳಕೆಯಲ್ಲಿದೆ. ತೆಲುಗಿನವರು ಇದನ್ನು ತುಮ್ಮಿಚಿಟ್ಟು ಎಂದು ಕರೆಯುತ್ತಾರೆ. 

ಹೆಚ್ಚು ನೀರು ಬಯಸದೇ ಕಂಡಕಂಡಲ್ಲಿ ಬೆಳೆಯುವ ಇವು ನೋಡಲು ಸುಂದರವಾದ ಪುಟ್ಟ ಪುಟ್ಟ ಹೂವುಗಳಿಂದ ಕಂಗೊಳಿಸುವ ಗಿಡ. ತುಂಬೆ ಸಾಮಾನ್ಯವಾಗಿ ಬಿಳಿ ಬಣ್ಣವನ್ನು ಹೊರತುಪಡಿಸಿ ಕಾಮನಬಿಲ್ಲಿನ ಎಲ್ಲಾ ಬಣ್ಣಗಳಲ್ಲೂ ಹೂವು ಬಿಡುತ್ತೆ. ಕೆಲವು ಗಿಡಗಳಲ್ಲಿ ಹೂವುಗಳು ಎರಡೆರಡು ಬಣ್ಣಗಳಿಂದಲೂ ಇರುತ್ತೆ. ತೀರಾ ದೊಡ್ಡದಾಗಿ ಬೆಳೆಯದ ಈ ಗಿಡ ಬೆಂಗಳೂರಿನ ಲಾಲ್ ಬಾಗ್ ಹಾಗೂ ಇತರೆ ಪಾರ್ಕ್ ಗಳಲ್ಲೂ ಕಾಣಸಿಗುತ್ತೆ. ಬಿಳಿ ಬಣ್ಣದ ತುಂಬೆ ಅತ್ಯಂತ ಶ್ರೇಷ್ಠವೆನಿಸಿದ್ದು ಔಷಧೀಯವಾಗಿ ಹೆಚ್ಚು ಬಳಕೆಯಲ್ಲಿದೆ.

ಡಾರ್ಕ್ ಸರ್ಕಲ್, ಕಣ್ಣಿನ ಉರಿ ಇತ್ಯಾದಿ ಸಮಸ್ಯೆಗೂ ರಾಮಬಾಣ ತುಂಬೆ ನಿಮ್ಮ ಕಣ್ಣಿನ ಸುತ್ತಲೂ ಕಪ್ಪು ವರ್ತುಲದ ಸಮಸ್ಯೆ ಇದಿಯಾ… ಆಗಾಗ ಕಣ್ಣಿನ ಉರಿ ಕಾಣಿಸಿಕೊಳ್ಳೋದು, ಕಣ್ಣು ಕೆಂಪಗಾಗುವ ಸಮಸ್ಯೆ ಇದ್ದಲ್ಲಿ ತುಂಬೆ ಗಿಡದ ರಸಕ್ಕೆ ಸ್ವಲ್ಪ ತಣ್ಣನೆಯ ನೀರು ಇಲ್ಲವೇ ಹಾಲು ಸೇರಿಸಿ ಅದ್ರಿಂದ ಮುಖ ತೊಳೆಯಿರಿ. ಕಣ್ಣಿಗೆ ತಂಪೆನಿಸುತ್ತೆ. ಮತ್ತು ಆರಾಮದಾಯಕ ಫೀಲ್ ನಿಮ್ಮದಾಗುತ್ತೆ.

ನೋವು ನಿವಾರಕವಾಗಿ ಕೆಲಸ ಮಾಡುತ್ತೆ ತುಂಬೆ ಒಂದಷ್ಟು ತುಂಬೆ ಗಿಡದ ಎಲೆ ಮತ್ತು ಕಾಂಡವನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ.. ನಂತ್ರ ಒಂದು ಬಟ್ಟೆಯನ್ನು ಅದ್ರಲ್ಲಿ ಮುಳುಗಿಸಿ ತೆಗೆದು ಬಿಸಿಬಿಸಿ ಶಾಖವನ್ನು ನೋವಿರುವ ಜಾಗಕ್ಕೆ ಒತ್ತಿಕೊಳ್ಳಿ. ಊತ ನಿವಾರಣೆಯಲ್ಲಿ ಈ ಶಾಖ ನೀಡುವ ಪದ್ದತಿ ಹಿಂದಿನಿಂದಲೂ ಇದೆ. ಅದ್ರಲ್ಲೂ ತುಂಬೆ ಗಿಡದ ಶಾಖ ಯಾವುದೇ ರೀತಿಯ ಊತದ ನೋವು ನಿವಾರಣೆಯಲ್ಲಿ ಸಹಾಯ ಮಾಡಲಿದೆ.

ಜೀರ್ಣಶಕ್ತಿ ಹೆಚ್ಚಿಸುವ ಸಾಮರ್ಥ್ಯ ತುಂಬೆಗಿದೆ ತುಂಬೆಗಿಡವನ್ನು ಬಿಸಿನೀರಿನಲ್ಲಿ ಕುದಿಸಿ ಕಷಾಯ ತಯಾರಿಸಿ. ಸ್ವಲ್ಪ ಉಪ್ಪು ಮಿಶ್ರಣದ ಕಷಾಯವು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಉದರದ ಸಮಸ್ಯೆಯ ನಿವಾರಣೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.

ಹಾವು ಕಡಿತವಾದಾಗ ಸಹಾಯಕ ತುಂಬೆ ಗಿಡದ ಎಲೆಯ ರಸವನ್ನು ಹಾವು ಕಡಿದ ಜಾಗಕ್ಕೆ ಹಚ್ಚುವ ಪದ್ದತಿ ಇದೆ. ಇದ್ರಿಂದ ವಿಷ ರಕ್ತದಲ್ಲಿ ಪಸರಿಸದೇ ಸಾವು ಸಂಭವಿಸುವ ಸಾಧ್ಯತೆ ಕಡಿಮೆಯಾಗುತ್ತೆ ಅಂತ ಹೇಳಲಾಗುತ್ತೆ.

ಶೀತ ಕಡಿಮೆ ಮಾಡಲು ತುಂಬೆ ರಸ 15 ರಿಂದ 20 ತುಂಬೆ ಹೂವನ್ನು ತೆಗೆದುಕೊಳ್ಳಿ. ಅದರ ರಸವನ್ನು ತೆಗೆಯಿರಿ. ತುಂಬಾ ಮೃದುವಾದ ಹೂವಾಗಿರೋದ್ರಿಂದ ಹಾಗೆಯೇ ಕಿವುಚಿದರೂ ರಸ ಬಂದೀತು.. ಈ ರಸಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ,. ಊಟ, ತಿಂಡಿ ಸೇವನೆಗೂ ಮುನ್ನ ಈ ಮಿಶ್ರಣವನ್ನು ಸೇವಿಸೋದ್ರಿಂದ ಶೀತಬಾಧೆ ನಿವಾರಣೆಯಾಗಲಿದೆ. ಗಂಟಲಲ್ಲಿ ಕಫ ಅತಿಯಾಗಿ ಹೊರ ಬರದೆ ಕಾಡುವ ಕಫದ ಸಮಸ್ಯೆಗೂ ಕೂಡ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ. 

ಮನೆಯಲ್ಲಿದ್ದರೆ ತುಂಬೆ ಕೀಟಗಳ ಬಾಧೆಯಿಂದ ಮುಕ್ತಿ ಸೊಳ್ಳೆಯ ಸಮಸ್ಯೆ ಅದ್ರಿಂದ ಬರುವ ರೋಗಗಳು ಮಹಾನಗರಿಗಳಲ್ಲಿ ಸರ್ವೇಸಾಮಾನ್ಯ. ಆದ್ರೆ ಮನೆಯಲ್ಲಿ ಒಂದು ತುಂಬೆಗಿಡ ನೆಟ್ಟು ನೋಡಿ. ಸೊಳ್ಳೆ ನಿಮ್ಮ ಮನೆಯಿಂದ ಕಾಲ್ಕಿತ್ತಿರುತ್ತೆ. ಸೊಳ್ಳೆಗಳು ಮಾತ್ರವಲ್ಲ ಇತರೆ ಕೀಟಗಳ ಕಾಟ ಕೂಡ ನಿಮ್ಮ ಮನೆಯಲ್ಲಿ ಇರೋದಿಲ್ಲ.

ಚರ್ಮರೋಗದ ನಿವಾರಣೆಗೆ ತುಂಬೆ ರಸ ಯಾರಿಗೆ ತುರಿಕೆ, ಚರ್ಮದಲ್ಲಿ ಕಲೆಗಳು ಇತ್ಯಾದಿ ಚರ್ಮ ಸಂಬಂಧಿ ಕಾಯಿಲೆ ಇದಿಯೋ ಅಂತವರು ತುಂಬೆಗಿಡದ ರಸವನ್ನು ಮೈಗೆ ಹಚ್ಚಿಕೊಳ್ಳೋದು ಇಲ್ಲವೇ ಸ್ನಾನದ ನೀರಿಗೆ ತುಂಬೆ ರಸವನ್ನು ಸೇರಿಸಿ ಪ್ರತಿನಿತ್ಯ ಸ್ನಾನ ಮಾಡೋದ್ರಿಂದ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳಬಹುದು.

ಅನಗತ್ಯ ರೋಗಾಣುಗಳ ನಿವಾರಣೆಗೆ ತುಂಬೆ ಪುಷ್ಪ ದೇಹದಲ್ಲಿ ರೋಗಾಣುಗಳು ಯಾವಾಗ, ಹೇಗೆ ಸೇರಿಕೊಳ್ಳುತ್ತೆ ಹೇಳೋದಕ್ಕೆ ಆಗೋದಿಲ್ಲ. ಹಾಗಾಗಿ ರೋಗ ನಿರೋಧಕ ಶಕ್ತಿ ದೇಹಕ್ಕೆ ಅತ್ಯವಶ್ಯಕ. ಯಾರು ತುಂಬೆ ಹೂವಿನ ಬಳಕೆ ಮಾಡ್ತಾರೋ, ಅದರ ಕಷಾಯವನ್ನು ಆಗಾಗ ಸೇವಿಸುತ್ತಾ ಇರುತ್ತಾರೋ ಅಂತವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿದ್ದು, ಅನಗತ್ಯ ರೋಗಾಣುಗಳು ದೇಹ ಸೇರದಂತೆ ಮತ್ತು ಅವು ಕಾಯಿಲೆ ಹರಡದಂತೆ ನೋಡಿಕೊಳ್ಳುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತೆ.

Leave a Comment

error: Content is protected !!